ಬಿರೆಲ್, ಅಗಸ್ಟಿನ್
1850-1933. ಇಂಗ್ಲಿಷ್ ಪ್ರಬಂಧಕಾರ, ಜೀವನ ಚರಿತ್ರಕಾರ, ವಿಮರ್ಶಕ ಮತ್ತು ರಾಜಕಾರಣಿ. ಹುಟ್ಟಿದ್ದು ಲಿವರ್‍ಪೂಲಿನ ಹತ್ತಿರ. ಕೇಂಬ್ರಿಜಿನಲ್ಲಿ ವಿದ್ಯಾಭ್ಯಾಸ. ನ್ಯಾಯಶಾಸ್ತ್ರದ ಪ್ರಾಧ್ಯಾಪಕ, ವಿದ್ಯಾ ಮಂಡಲಿಯ ಅಧ್ಯಕ್ಷ, ವಿದ್ಯಾಮಂತ್ರಿ, ಐರ್ಲೆಂಡಿನ ಪ್ರಧಾನ ಕಾರ್ಯದರ್ಶಿ ಮುಂತಾದ ಗೌರವಾನ್ವಿತ ಹುದ್ದೆಗಳಲ್ಲಿದ್ದ. 1918ರಲ್ಲಿ ಸಾರ್ವಜನಿಕ ಕ್ಷೇತ್ರದಿಂದ ಮರೆಯಾಗಿ ಸಾಹಿತ್ಯ ಕೃಷಿಗೆ ತೊಡಗಿದ. ಓಬಿಟರ್ ಡಿಕ್ಟಾ (1884), ಲೈಫ್ ಆಫ್ ಚಾರ್ ಲೆಟ್ ಬ್ರಾಂಟೆ (1887), ರೆಸ್ ಜ್ಯೂಡಿಕೇಟ (1892), ಮೆನ್, ವುಮೆನ್ ಅಂಡ್ ಬುಕ್ಸ್ (1894), ವಿಲಿಯಮ್ ಹ್ಯಾಜಲಿಟ್ (1902)-ಇವು ಈತನ ಪುಸ್ತಕಗಳ ಪೈಕಿ ಕೆಲವು. ಈತನ ಪ್ರಬಂಧಗಳಲ್ಲಿ ಗಹನತೆ ಇಲ್ಲದಿದ್ದರೂ ಪ್ರಾಮಾಣಿಕತೆ, ವ್ಯಕ್ತಿತ್ವದ ಆಕರ್ಷಣೆ ಉಂಟು. ಚಾತುರ್ಯ, ಹಾಸ್ಯ ಆಕರ್ಷಣೀಯವಾದ ಕುಚೋದ್ಯ, ಪಾಂಡಿತ್ಯ, ಅದರ ಉಚಿತ ಬಳಕೆ ಇವನ್ನು ಈತನ ಬರಹಗಳಲ್ಲಿ ಕಾಣಬಹುದು.		  
  (ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ